ಬೆಂಗಳೂರು ಗ್ರಾಮಾಂತರ
ಪ್ರತಿಯೊಬ್ಬರೂ ವ್ಯಕ್ತಿತ್ವ, ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು.
ದೊಡ್ಡಬಳ್ಳಾಪುರ: ಈಗ ಎಲ್ಲವೂ ‘ಮನಿ’ಸ್ಥಿತಿಯೇ ನಿರ್ಧರಿಸುತ್ತದೆ ಎಂದಾಗಿದೆ. ಹಣವನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ ಎನ್ನುವಂತಾಗಿದೆ. ಅಧಿಕಾರದಿಂದ ಸಂಪತ್ತು ಸುಗಮವಾಗಿ ಹರಿದುಬರುತ್ತದೆ ಎನ್ನುವಂತಾಗಿದೆ. ಇದರಿಂದ ಪ್ರಜಾಪ್ರಭುತ್ವ ಹಾಸ್ಯಾಸ್ಪದ ಎಂದೆನಿಸಿದೆ.ಇದನ್ನು ಹೋಗಲಾಡಿಸ ಬೇಕು ಎಂದರೆ ನಮ್ಮತನ,ವ್ಯಕ್ತಿತ್ವ, ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ನಿರ್ದೇಶಕ ಹುಲಿಕಲ್ ನಟರಾಜ್ ಹೇಳಿದರು.
ಅವರು ಭಾನುವಾರ ಹುಲುಕಡಿ ಬೆಟ್ಟದ ವೀರಭದ್ರ ಸ್ವಾಮಿ ಸಭಾ ಭವನದಲ್ಲಿ ನಡೆದ ಕನ್ನಡ ಪಕ್ಷದ ಕಾರ್ಯಕರ್ತರ ಶಿಬಿರದಲ್ಲಿ ಮಾತನಾಡಿದರು.
ಬದಲಾಗಬೇಕಾಗಿರುವುದು ಮನೆಯ ವಾಸ್ತು ಅಲ್ಲ, ಮನಸ್ಸಿನ ವಾಸ್ತು. ಬಸವಣ್ಣನಿಂದ ಕುವೆಂಪುವರೆಗೂ ಹಲವಾರು ದಾರ್ಶನಿಕರು ವೈಜ್ಞಾನಿಕ ಚಿಂತನೆಯ ಬಗ್ಗೆ ಇಂದಿಗೂ ಹೇಳುತ್ತಲೇ ಬಂದಿದ್ದಾರೆ.ಆದರೆ ವಾಸ್ತವದಲ್ಲಿ ಮಾತ್ರ ಬದಲಾವಣೆ ಹಿಮ್ಮುಖವಾಗುತ್ತಿದೆ. ಇದರ ಬಗ್ಗೆ ಎಲ್ಲಾ ಪ್ರಜ್ಞಾವಂತರು ಗಂಭೀರವಾಗಿ ಚಿಂತನೆ ನಡೆಸದ ಹೊರತು ಬದುಕು ಮತ್ತಷ್ಟು ದುಸ್ತರವಾಗಲಿದೆ ಎಂದರು.
ಪ್ರಗತಿಪರ ಚಿಂತಕ ಮಂಜುನಾಥ ಎಂ.ಅದ್ದೆ ಮಾತನಾಡಿ, ಕನ್ನಡ ಚಳವಳಿಯನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ನಾವು ಎಲ್ಲರೊಂದಿಗೆ ನಂಟನ್ನು ಬೆಸೆದುಕೊಳ್ಳಬೇಕು. ಸಮಸ್ಯೆಗಳನ್ನು ತಳಮಟ್ಟದಲ್ಲಿ ಗ್ರಹಿಸಿ, ಅದರ ನಿವಾರಣೋಪಾಯುಗಳನ್ನು ಕಂಡುಕೊಳ್ಳಬೇಕು. ಬೀದಿಯಲ್ಲಿ ಘೋಷಣೆ ಕೂಗಿ ಸುಮ್ಮನಾದರೆ ಸಮಸ್ಯೆಗಳು ಎಲ್ಲಿರುತ್ತವೆಯೋ ಅಲ್ಲೇ ಇರುತ್ತವೆ. ಇಲ್ಲಿ ಹೆಚ್ಚು ಯುವ ಜನರಿದ್ದಾರೆ. ಇವರನ್ನು ಅರಿವಿನ ಹೊಸ ಹಾದಿಗೆ ಹೊರಳಿಸಬೇಕು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ಕನ್ನಡ ಸಂಘಟನೆಗಳ ಕಾರ್ಯಕರ್ತರಿಗೆ ಸಾಹಿತ್ಯದ ಆಳವಾದ ಅರಿವು ಮುಖ್ಯವಾಗಿದೆ. ಭಾಷಾ ವಿಷಯದಲ್ಲಿ ಭಾವನಾತ್ಮಕತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಭಾಷೆಯ ಬಗೆಗಿನ ಜ್ಞಾನವು ಸಹ. ಕನ್ನಡ ಭಾಷೆಯ ಕುರಿತು ಬೆಂಗಳೂರಿನಲ್ಲಿ ಕೆಲವರ ನಡವಳಿಕೆಗಳು ಹಾಗೂ ಹೇಳಿಕೆಗಳಿಗೆ ತಕ್ಕ ಉತ್ತರ ನೀಡುವ ಸಾಮರ್ಥ್ಯವನ್ನು ಎಲ್ಲ ಕನ್ನಡಗಿರು ಬೆಳೆಸಿಕೊಳ್ಳಬೇಕು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬಾನು ಮುಷ್ತಾಕ್ ಅವರ ಕಥ ಸಂಕಲನ ಕೃತಿ ಬೂಕರ್ ಪ್ರಶಸ್ತಿ ಪಡೆದಿರುವುದೇ ನಮ್ಮ ಸಾಹಿತ್ಯ,ಭಾಷೆಯ ಹಿರಿಮೆಗೆ ಸಾಕ್ಷಿಯಾಗಿದೆ ಎಂದರು.
ಜಾಗೃತ ಕರ್ನಾಟಕದ ಸಂಚಾಲಕ ಬಿ.ಸಿ.ಬಸವರಾಜ್ ಮಾತನಾಡಿ, ನಿರುದ್ಯೋಗ,ಅಪೌಷ್ಠಿಕತೆ ಹೆಚ್ಚಿದೆ.ಒಕ್ಕೂಟ ವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ. ಶಿಕ್ಷಣದ ಗೊತ್ತುಗುರಿಗಳನ್ನು ಕೇಂದ್ರವೇ ನಿರ್ಧರಿಸುವಂತಾಗಿದೆ. ಧರ್ಮದ ಅಮಲಿನಲ್ಲಿ ಎಲ್ಲ ವಿವೇಕವನ್ನು ನೆಲಸಮ ಮಾಡಲಾಗಿದೆ. ತಲಾದಾಯದ ಮಟ್ಟ ಎಷ್ಟಿದೆ ಎಂಬುದು ತಿಳಿದುಕೊಂಡರೆ ಭಾರತ ಇಡೀ ವಿಶ್ವದಲ್ಲಿ 4ನೇ ಬಲಾಢ್ಯ ದೇಶ ಎಂಬುದು ಎಷ್ಟು ಮಿಥ್ಯೆ ಎಂಬುದು ತಿಳಿಯಲಿದೆ. ಮತಾಂದತೆ ಹಾಗೂ ಅವುಗಳು ಜೀವ ಮಾಡಿಕೊಂಡಿರುವ ಸಂಘಟನೆಗಳನ್ನು, ಪಕ್ಷಗಳನ್ನು ತೊಲಗಿಸ ಬೇಕು ಎಂದು ಹೇಳಿದರು.ಶಿಬಿರದಲ್ಲಿ ಕರ್ನಾಟಕ ರಣಧೀರಪಡೆಯ ಹರೀಶ್ ಭೈರಪ್ಪ,ರಾಜ್ಯ ರೈತ ಸಂಘಧ ಹಿರಿಯ ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ,ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್,ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್,ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್,ಕಾರ್ಯದರ್ಶಿ ಡಿ.ಪಿ.ಆಂಜನೇಯ ಇದ್ದರು.