ಚಿಕ್ಕಬಳ್ಳಾಪುರ

ಬಡವರಿಗೆ ಭೂಮಿ ನೀಡುವಲ್ಲಿ ಸರ್ಕಾರ ವಿಫಲ.!

Published

on

ಚಿಕ್ಕಬಳ್ಳಾಪುರ/ಗುಡಿಬಂಡೆ: ಹತ್ತಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಬಡ ರೈತರಿಗೆ ಭೂಮಿ ಒಡೆತನದ ಹಕ್ಕು ಸಿಗುತ್ತಿಲ್ಲ, ಇದು ಸ್ಥಳೀಯ ಜನಪ್ರತಿನಿಧಿಗಳ ಮತ್ತು ತಾಲೂಕು ಆಡಳಿತದ ಸಂಪೂರ್ಣ ವೈಫಲ್ಯ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಆರೋಪಿಸಿದ್ದಾರೆ.

ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಸಿಪಿಎಂ ಹಮ್ಮಿ ಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧದ ಪ್ರತಿಭಟನೆಯಲ್ಲಿ ಸಿದ್ದಗಂಗಪ್ಪ ಮಾತನಾಡಿದರು.”ತಾಲೂಕಿನಲ್ಲಿ ಬಗರ್‌ ಹುಕುಂ ಯೋಜನೆ ಯಡಿ ಫಾರಂ 50, 53, 57ರಲ್ಲಿ ಅನೇಕ ರೈತರು ಸಾಗುವಳಿ ಚೀಟಿ ಗಾಗಿ ಅರ್ಜಿ ಸಲ್ಲಿಸಿದ್ದಾರೆ.ಆದರೆ,ಅಕ್ರಮ ಸಕ್ರಮ ಸಮಿತಿಯಲ್ಲಿ ಭೂಮಿ ಮಂಜೂರು ಆಗುತ್ತಿರುವುದು ಶ್ರೀಮಂತರಿಗೆ, ಶಾಸಕರ ಬೆಂಬಲಿಗರಿಗೆ ಮಾತ್ರ.ಬಡವರಿಗೆ ಯಾವುದೇ ಜಮೀನು ಸಿಗುತ್ತಿಲ್ಲ”ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೆಲವು ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ ಮಂಜೂರು ಮಾಡಿಸಲು ಮತ್ತು ದುರಸ್ತಿ ಮಾಡಿಸಲು ಹಣ ವಸೂಲಿ ಮಾಡುತ್ತಿದ್ದಾರೆ.ಈಗಾಗಲೇ ಮಂಜೂರಾದ ಜಮೀನುಗಳ ರೈತರನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುತ್ತಿರುವುದು ಕೂಡ ನಡೆಯುತ್ತಿದೆ ಎಂದು ಆಕ್ರೋಷ ಹೊರಹಾಕಿದರು.

ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮುನಿ ವೆಂಕಟಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಗಳಿಂದ ಜನಜೀವನ ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೈತ ವಿರೋಧಿ ಮಸೂದೆಗಳನ್ನು ರದ್ದುಪಡಿಸುವುದಾಗಿ ಹೇಳಿತ್ತು.ಆದರೆ, ಮೂರು ವರ್ಷಗಳಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅನುದಾನ ಸಿಗುತ್ತಿಲ್ಲ ಎಂದು ಕ್ಷೇತ್ರದ ಶಾಸಕರು ಹೇಳುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರವಿದ್ದರೂ ಯಾವುದೇ ವಿಶೇಷ ಅನುದಾನ ಗಳನ್ನು ತರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. ಇದ ರಿಂದ ಜನರು ಫ್ಲೋರೈಡ್ ಮಿಶ್ರಿತ ನೀರನ್ನು ಕುಡಿಯುವಂತಾಗಿದೆ. ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಸಿಗುತ್ತಿಲ್ಲ.ರೈತರಿಗೆ ಸರಿ ಯಾದ ಸೌಲಭ್ಯಗಳು ಲಭ್ಯವಿಲ್ಲ. ಮಧ್ಯವರ್ತಿ ಗಳ ಮತ್ತು ದಳ್ಳಾಲಿಗಳ ಹಾವಳಿಯಿಂದ ಜನಸಾಮಾನ್ಯರು ಸಮಸ್ಯೆಗೊಳಗಾಗಿದ್ದಾರೆ ಎಂದು ಮುನಿವೆಂಕಟಪ್ಪ ವಿವರಿಸಿದರು. ತಮ್ಮ ಪಕ್ಷದ ಮುಖಂಡರು ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನು ಕರೆದು ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗ ಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ ಅವರು ಪ್ರತಿಭಟನಾಕಾರ ರಿಂದ ಮನವಿ ಪತ್ರ ಸ್ವೀಕರಿಸಿದರು.ತಮ್ಮ ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮತ್ತು ಉಳಿದವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.ಈ ವೇಳೆ ಸಿಪಿಎಂ ಪಕ್ಷದ ಮುಖಂಡರು ಜಯ ರಾಮರೆಡ್ಡಿ, ವೆಂಕಟ ರಾಜು,ರಾಜಪ್ಪ, ಆದಿನಾರಾಯಣ, ಶಿವಪ್ಪ, ದೇವರಾಜು,ಗಂಗರಾಜು, ಲಕ್ಷ್ಮೀ ನಾರಾಯಣ, ಸೋಮಶೇಖರ್, ಸೀನಪ್ಪ, ಶ್ರೀನಿವಾಸ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Trending

Exit mobile version